ಧ್ಯೇಯ ಮತ್ತು ಗುರಿಗಳು
ನಮ್ಮ ಧ್ಯೇಯ
1996 ರಲ್ಲಿ ಸ್ಥಾಪಿಸಲ್ಪಟ್ಟ ಈ ಅದ್ವಿತೀಯ ಸಹಕಾರಿಯು ತನ್ನ ಬೆಳವಣಿಗೆಗಾಗಿ ಮಿತವ್ಯಯ, ಒಡನಾಡಿತನ, ಚಾರಿತ್ರ್ಯ, ಅಳವಡಿಸುವಿಕೆ ಮತ್ತು ಸಂಬಂಧಪಟ್ಟ ಎಲ್ಲ ಜನರ ನಿಸ್ವಾರ್ಥಸೇವೆಗಳೆಂಬ ಭದ್ರ ಬುನಾದಿಯ ಮೇಲೆ ನಿಂತಿದೆ. ನಾವು ಪ್ರಾಮಾಣಿಕ, ನಿಷ್ಠ ಮತ್ತು ಗ್ರಾಹಕ ಸೇವೆಯಲ್ಲಿ ಮಾನವೀಯತೆಯ ಜತೆಗೆ ಇತ್ತೀಚಿನ ತಂತ್ರಜಾನ ಮತ್ತು ಸಂಶೋಧನೆಗಳ ಹೊಂದಿಸುವಿಕೆಯಿಂದಾಗಿ ನಮ್ಮ ಸದಸ್ಯರ ಸದ್ಭಾವನೆಯನ್ನು ಗಳಿಸುವುದರಲ್ಲಿ, ಬದ್ಧ ವೃತ್ತಿಪರರಾಗಿ ಸಫಲರಾಗಿದ್ದೇವೆ.
ಸಮಾಜದ ಹಾಗು ಸದಸ್ಯ ಬಂಧುಗಳ ಸರ್ವತೋಮುಖ ಅಭಿವೃದ್ಧಿ ನಮ್ಮ ಧ್ಯೇಯ. ಆರ್ಥಕವಾಗಿ ಸಧೃಡವಾಗಿರುವ ನಮ್ಮ ಸಹಕಾರಿ ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಅನುಷ್ಠಾನಗೊಳಿಸಿದೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳಲ್ಲಿ ನೇರವಾಗಿ ಸಮಾಜದ ಉತ್ತಮ ಬೆಳವಣಿಗೆಗೆ ಸಹಕರಿಸುತ್ತಾ ಬಂದಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದಂತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪ್ರೋತ್ಸಾಹಧನ ನೀಡುವುದರೊಂದಿಗೆ ಸಮಾಜದ ಗಣ್ಯರಿಂದ ಉಪನ್ಯಾಸ, ಸಲಹೆ, ಮಾರ್ಗದರ್ಶನ ನೀಡುತ್ತಾ ಬಂದಿದೆ. ಶ್ರೀಯುತ ಸಂತೋಷ್ ಹೆಗ್ಡೆ, ಮಾಜಿ ನ್ಯಾಯಾಧೀಶರು ಸುಪ್ರೀಂ ಕೋರ್ಟ್, ಡಾ. ಪುತ್ತೂರಾವ್, ಶ್ರೀಮತಿ ಗೀತಾ ರಾಮಾನುಜಂ ಇವರಲ್ಲಿ ಪ್ರಮುಖರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರುಗಳನ್ನು ಗುರುತಿಸಿ, ನಮ್ಮ ವಾರ್ಷಿಕ ಸರ್ವ ಸದಸ್ಯರ ಸಭೆಯಂದು ಸನ್ಮಾನಿಸಿ, ನೆನಪಿನ ಕಾಣಿಕೆ ಮತ್ತು ನಗದು ಗೌರವವನ್ನು ನೀಡಲಾಗುತ್ತಿದೆ, ಶ್ರೀಮತಿ ಸಾಲುಮರದ ತಿಮ್ಮಕ್ಕ, ಸ್ವಾತಂತ್ರ್ಯ ಹೋರಾಟಗಾರ ಶ್ರೀ ದೊರೆಸ್ವಾಮಿ, ಪ್ಯಾರಾ ಒಲಂಪಿಕ್ ಈಜುಗಾರರಾದ ಶ್ರೀ ವಿಶ್ವಾಸ್ ಕೆ. ಎಸ್. ಇವರಲ್ಲಿ ಕೆಲವರು. ಒಟ್ಟಾರೆ ನಮ್ಮ ಸದಸ್ಯರ ಆರ್ಥಿಕ ಸ್ವಾವಲಂಬನೆಗೊಳಿಸುವುದರ ಜೊತೆಗೆ ಉತ್ತಮ, ಆರೋಗ್ಯಕರ, ಸಮಾನತೆಯುಳ್ಳ ಶಾಂತಿ ನೆಮ್ಮದಿಯ ಸಮಾಜವನ್ನು ಸೃಷ್ಠಿಸುವುದು ನಮ್ಮ ಧ್ಯೇಯವಾಗಿದೆ. ಇದು ಸಹಕಾರಿ ಚಳುವಳಿಯ ಮೂಲಮಂತ್ರವಾಗಿದೆ.
ನಮ್ಮ ಗುರಿ
ಶ್ರೀಸಾಮಾನ್ಯನ ಆರ್ಥಿಕ ಅಭಿವೃದ್ಧಿ ನಮ್ಮ ಗುರಿ. ಸಹಕಾರಿ ತತ್ವಗಳ ಆಧಾರದ ಮೇಲೆ ದೇಶದ ಸಹಕಾರಿ ಆರ್ಥಿಕ ವ್ಯವಸ್ಥೆ ಹಾಗು ಸಾಮಾಜಿಕ ಸಬಲೀಕರಣಕ್ಕೆ ಗುಣಾತ್ಮಕ ದೃಷ್ಟಿಕೋನ ನೀಡುವ ಕಾರ್ಯಕ್ರಮಗಳನ್ನು ಸತತ 24 ವರ್ಷಗಳಿಂದಲೂ ನಿರ್ವಹಿಸುತ್ತಾ ಬಂದಿದೆ. ಸಹಕಾರ ತತ್ವದ ಪ್ರಾಮುಖ್ಯತೆ ಹಾಗು ಅದರ ಪ್ರಯೋಜನಗಳನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುವುದು.
ಭಾರತೀಯ ಸಂಸ್ಕೃತಿಯಲ್ಲಿ ಸಹಕಾರಿ ಪದ್ಧತಿ ಹಿಂದಿನಿಂದಲೂ ಹಾಸುಹೊಕ್ಕಾಗಿದೆ. “ಸಹನಾ ಭವತು ಸಹನೌ ಭುನಕ್ತು” ಎಂಬ ಉಪನಿಷತ್ತಿನ ಉಕ್ತಿಗಳು ಮನುಷ್ಯ ಪರಸ್ಪರ ಸಹಕಾರ ಭಾವದಿಂದ ಸಾಗಿದಾಗ ಬದುಕಿನಲ್ಲಿ ನೆಮ್ಮದಿ ಹಾಗು ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂಬ ಸಂದೇಶವನ್ನು ಸಾರಿದೆ.
“ಪರೋಪಕಾರಾರ್ಥಮಿದಂ ಶರೀರಂ” ಎಂಬ ಭಾರತದ ಪುರಾತನ ಉಕ್ತಿ ಸಾರುವ ಸಂದೇಶವು ಕೂಡ ಮನುಷ್ಯ ಸಹಕಾರಿಯಾಗಿ ಬಾಳಬೇಕೆಂಬುದನ್ನು ಸಂಕೇತಿಸುತ್ತದೆ. ನಮ್ಮ ಸಹಕಾರಿ ಸಂಸ್ಥೆಯ ಆಶಯವು ಕೂಡ ಇದೇ ಆಗಿದ್ದು ಸಮಾಜಕ್ಕೆ ಸಹಕಾರದ ಮಹತ್ವದ ಬೆಳಕನ್ನು ನೀಡುವ ಮಹತ್ವದ ಗುರಿಯನ್ನು ಹೊಂದಿದೆ. “ವಸುದೈವ ಕುಟುಂಬ” ಎನ್ನುವಂತೆ ವಿಶ್ವವೇ ನಮ್ಮ ಕುಟುಂಬವಾಗಿದೆ.